Thursday, 28 January 2016


                                                                           ಕನಸು - ನನಸು

ಮತ್ತೆ ಮತ್ತೆ ಅದೇ ಕನಸು ,ಅದೇ ಆಸೆ.
ಯಾಕೆ ಹೀಗೆ?
ಯತ್ನ, ಪ್ರಯತ್ನ, ಮರುಯತ್ನ ,
ಯಶವಿಲ್ಲ, ಮತ್ತೆ ನಿರಾಸೆ .
ಆರಂಭ ಅಂತ್ಯದ ಅರಿವಿಲ್ಲ.
ಗೊಂದಲ ಅಯೋಮಯವೆಲ್ಲ
ನನಗೇಕೆ ಹೀಗೆ? ಎಂಬ ಪ್ರಶ್ನೆ

ದಾರಿಗಳೇನೋ ಇವೆ
ಹೋಗುವುದೆಲ್ಲೆಂಬ ಅಸಮಂಜಸತೆ
ಆ ದಾರಿ ದುರ್ಗಮ , ಈ ದಾರಿಯಲ್ಲಿ ಜನವೋ ಜನ ,
ಮತ್ತೆ ಕೆಲವು ಖಾಲಿ ಖಾಲಿ,
ಮುಂದೇನೋ? ಎಂತೋ? ಎಂಬ ಭಯ
ಕೈ ಹಿಡಿದು ಮುನ್ನಡೆಸುವವರಿಗಾಗಿ ಹುಡುಕಾಟ
ಯಾರಿಗೆ ಪುರುಸೊತ್ತಿದೆ ಈ ಮ್ಯಾರಥಾನ್ ಓಟದಲ್ಲಿ ?


ದಾರಿ ತಪ್ಪಿ ದಿಕ್ಕೆಟ್ಟ ಕಂದಮ್ಮನ ಸ್ಥಿತಿ
ಕಣ್ಣು ತೋಯ್ದು,ಗಂಟಲುಬ್ಬಿ ,
ಕಣ್ಣೀರು  ಧಾರೆ ಧಾರೆ .
ಅಳುವಿನ ಧ್ವನಿಯೂ ಕರಗಿ ಹೋಯ್ತು
ಅಷ್ಟು ಜನಜಾತ್ರೆ .

ಅಲ್ಲೇ ಸಾವರಿಸಿಕೊಂಡು ಹಾಗೆ ನೋಡಿದೆ
ಅರೆ ! ಎಲ್ಲಾ  ನನ್ನಂತವರೆ!
ಮತ್ತೆ ನಾನ್ಯಾಕಾಗಬಾರದು ?
ಯಾರದ್ದೋ ಕೈ ಹಿಡಿದೆ .
ಕೊಸರಿಕೊಂಡರು, ನಾ ಬಿಡಲಿಲ್ಲ .
ಕನಿಕರಿಸಿ, ಕೈ ಹಿಡಿದು, ಮುನ್ನಡೆಸಿದರು .
ದಾರಿ ಸವೆದಂತೆ ಸವೆದಂತೆ ,
ಮುಂದೆ ನಡೆದಂತೆ ನಡೆದಂತೆ ,
ಯತ್ನ ಪ್ರಯತ್ನಗಳಿಗೆ ಗರಿ ಮೂಡಿ ,
ರೆಕ್ಕೆ ಬಿಚ್ಚಿ , ಆಕಾಶದುದ್ದಗಲಕ್ಕೂ ಹಾರಾಟ ,
ನಿತ್ಯ ಹೋರಾಟ 
ಸಾಫಲ್ಯದ ರಸದೂಟ!!
ಅದೋ ! ಅಲ್ಲಿತ್ತು ನನ್ನ kanasina nanasu !!.
ಮತ್ತೆ ಕಣ್ಣು ತೋಯ್ದು , ಗಂಟಲುಬ್ಬಿ,
ಪನ್ನೀರ ಧಾರೆ ಧಾರೆ.



ಆದರೂ ಇನ್ನೂ ಏನೋ ಬೇಕೆನ್ನುವ ತುಡಿತ,
ಆಗಸದಲ್ಲಿ ಇನ್ನಷ್ಟು ಹಕ್ಕಿಗಳನ್ನು ನೋಡುವ ಮಿಡಿತ .
ಮತ್ತೆ ಹೋದೆ ಅಲ್ಲಿಗೆ
ಅದೇ ದಾರಿ,ಅದೇ ಜಾಗ ,ಇನ್ನಷ್ಟು ಜನ
ಮತ್ತೆ ಹುಡುಕಾಟ
ಕೈ ಹಿಡಿಯಲಲ್ಲ ,ಕೈ ಕೊಡಲು
ನನ್ನಂತೆ ಮತ್ತೊಂದು ಹಕ್ಕಿಗೆ ರೆಕ್ಕೆಯಾಗಲು